ಎಲ್ಲ ಸಂಶೋಧಕ ಮತ್ತು ಸಂಶೋಧನಾಸಕ್ತರಿಗೆ ’ಸಂಶೋಧನಲೋಕ’ದ ಆತ್ಮೀಯ ಸ್ವಾಗತ
ಕನ್ನಡದಲ್ಲಿ ಸಂಶೋಧನಾ ಕ್ಷೇತ್ರ ಬಹುವಾಗಿ ವಿಸ್ತರಿಸಿದೆ; ವಿವಿಧ ಆಯಾಮಗಳಲ್ಲಿ ಹರಡಿಕೊಂಡಿದೆ; ಒಂದು ಪ್ರತ್ಯೇಕ ಜ್ಞಾನ ಶಿಸ್ತಾಗಿ ಮೈದುಂಬಿ ಬೆಳೆಯುತ್ತಿದೆ. ರಾಜ್ಯದ ಅಥವಾ ಬೇರಾವುದೇ ವಿಶ್ವವಿದ್ಯಾಲಯದ ಕ್ಯಾಂಪಸ್‌ಗಳು ಸಂಶೋಧನ ಚಟುವಟಿಕೆಯ ಪ್ರಮುಖ ತಾಣಗಳಾಗಿವೆ. ಇದರಾಚೆಗೂ ವಿವಿಧ ಸಂಸ್ಥೆಗಳು, ವ್ಯಕ್ತಿಗಳಿಂದ ಕೂಡ ಸಂಶೋಧನೆ ನಡೆಯುತ್ತಿದೆ. ಇಲ್ಲಿ ’ಕನ್ನಡ ಸಂಶೋಧನೆ’ ಎಂದರೆ ಕೇವಲ ಕನ್ನಡವೆಂಬ ಸಬ್ಜೆಕ್ಟ್‌ನ ಸಂಶೋಧನೆಯಲ್ಲ, ಕನ್ನಡ ಭಾಷೆಯ ಮೇಲೆ ನಡೆಯುತ್ತಿರುವ ಸಂಶೋಧನೆ ಮಾತ್ರವಲ್ಲ, ಯಾವುದೇ ಜ್ಞಾನ ಶಿಸ್ತಿನಡಿಯಲ್ಲಿ ನಡೆಯುತ್ತಿರುವ, ಒಟ್ಟು ಗ್ರಹಿಕೆಯಲ್ಲಿ ಕನ್ನಡ ಬದುಕಿನ ಕುರಿತಾದ ಸಂಶೋಧನೆಯನ್ನು ಇಲ್ಲಿ ಕನ್ನಡ ಸಂಶೋಧನೆ ಎಂದೇ ಪರಿಭಾವಿಸಲಾಗಿದೆ. ಕನ್ನಡ ಸಂಶೋಧನೆ ಕನ್ನಡದಲ್ಲಿ ಮಾತ್ರವೇ ಇರಬೇಕೆಂದಲ್ಲ, ಇಂಗ್ಲಿಷ್ ಸೇರಿದಂತೆ ಇತರೆ ಭಾಷೆಗಳಲ್ಲೂ ಇರಲು ಸಾಧ್ಯ.
ಕನ್ನಡದಲ್ಲಿ ವಿಭಿನ್ನ ನೆಲೆಗಳಲ್ಲಿ ಸಂಶೋಧನೆ ನಡೆಯುತ್ತಿದೆ. ಸಂಶೋಧಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. (ಗುಣಮಟ್ಟ ತಗ್ಗಿದೆ ಎನ್ನುವುದು ಬೇರೆ ಮಾತು) ಇವೆಲ್ಲದ ನಡುವೆ ಇಲ್ಲೊಂದು ದುರಂತ ಇದೆ. ವಿದೇಶಿ ವಿಶ್ವ ವಿದ್ಯಾಲಯಗಳೂ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಕನ್ನಡ ಬದುಕಿನ, ಕನ್ನಡ ಸಂಸ್ಕೃತಿ ಮೇಲೆ ಯಾವ ರೀತಿಯ ಅಧ್ಯಯನಗಳು ನಡೆಯುತ್ತಿವೆ ಎನ್ನುವ ಕುರಿತು ತಿಳಿಯಲು ಒಂದು ವ್ಯವಸ್ಥೆ ಇಲ್ಲ. ಹೀಗಾಗಿ ಒಂದಕ್ಕೊಂದು ಭಿನ್ನ ನಿಲುವಿನ, ಒಂದಕ್ಕೊಂದು ಬದ್ಧ ವೈರದ, ಪರಸ್ಪರ ಯಾವುದೇ ಅಸ್ಮಿತೆ ಇಲ್ಲದೆ ಹಲವು ಸಂಶೋಧನೆಗಳು ನಡೆಯುತ್ತಿವೆ. ಒಂದು ಕ್ಯಾಂಪಸ್‌ನಲ್ಲಿ ಚರ್ಚಿಸುವ ಸಂಶೋಧನ ವಿಚಾರಗಳು ಮತ್ತೊಂದು ಕ್ಯಾಂಪಸ್‌ನಲ್ಲಿ ಔಟ್ ಡೇಟೆಡ್ ಎನಿಸಿಕೊಳ್ಳುತ್ತಿವೆ. ಒಂದು ಪಂಥ ಮುಂದಿಡುವ ವಿಚಾರಗಳು ಮತ್ತೊಂದು ಪಂಥಕ್ಕೆ ಸಂಪೂರ್ಣ ಅಪಥ್ಯವಾಗಿರುತ್ತವೆ. ಒಂದೇ ತೆರನಾದ ಆಲೋಚನೆಗಳು ಆದರೆ ಭಿನ್ನ ಎನ್ನುವಂತೆ ಭಾವಿಸಿ ಕಾರ್ಯ ನಿರ್ವಹಿಸುತ್ತಿರುತ್ತವೆ. ಸಂಶೋಧನೆಯಲ್ಲಿ ಆಸಕ್ತಿ ತಳೆಯುವ ಯುವ ಸಂಶೋಧರಿಗೆ ತಾತ್ವಿಕ ತರಬೇತಿ, ಅರಿವು, ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ. ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ. ಇದೆಲ್ಲಕ್ಕಿಂತ ಮುಖ್ಯವಾಗಿ ಸಂಶೋಧನ ಕ್ಷೇತ್ರದಲ್ಲಿರುವ ಅವಕಾಶಗಳ ಮಾಹಿತಿ ಇಲ್ಲವೇ ಇಲ್ಲ. ಕನ್ನಡ ಸಂಶೋಧನೆಯಲ್ಲಿ ಇರುವ ಈ ಕೊರತೆಗಳನ್ನ ತುಂಬುವ ಮಹತ್ವಾಕಾಂಕ್ಷೆ ಸಂಶೋಧನಲೋಕಕ್ಕಿದೆ.
ಸಂಶೋಧನಲೋಕ ಕನ್ನಡ ಸಂಶೋಧನೆಯ ಎಲ್ಲ ಪ್ರಕ್ರಿಯೆಗಳನ್ನ ಅದರ ತಾತ್ವಿಕತೆಯಲ್ಲಿ ಹಿಡಿದಿಡುವ ವಿನೂತನ ಪ್ರಯತ್ನ. ಕನ್ನಡ ಸಂಶೋಧನಲೋಕದಲ್ಲಿ ನಡೆಯುತ್ತಿರುವ ವಾಗ್ವಾದಗಳು, ಚಿಂತನ ಮಂಥನ, ಹೊಸ ಚಿಂತನ ಧಾರೆಗಳೂ ಸೇರಿದಂತೆ ಸಂಶೋಧನಲೋಕದ ಇತ್ತೀಚಿನ ಪ್ರವೃತ್ತಿಗಳನ್ನು ಕಾಲ ಕಾಲಕ್ಕೆ ಅಪ್‌ಡೇಟ್ ಮಾಡುವುದು ಇದರ ಮೂಲ ಉದ್ದೇಶ. ಅಲ್ಲದೆ ಕನ್ನಡದ ಸಂಶೋಧನೆ ಹಿಡಿಯಬೇಕಾದ ಹಾದಿಯ ಕುರಿತೂ ಈ ಲೋಕ ಚರ್ಚಿಸುತ್ತದೆ. ಕನ್ನಡದದ ಕುರಿತಾಗಿ ನಡೆಯುತ್ತಿರುವ ಯಾವುದೇ ಭಾಷೆಯ ಸಂಶೋಧನೆಯನ್ನೂ ಇದು ಒಳಗೊಳ್ಳುತ್ತದೆ. ಸಂಶೋಧಕರನ್ನು ಒಂದು ವೇದಿಕೆಗೆ ತರಬೇಕೆಂಬುದೇ ಸಂಶೋಧನಲೋಕದ ಪ್ರಮುಖ ಉದ್ದೇಶ.
ಎಲ್ಲರೂ ಕೈಜೋಡಿಸಿ, ಸಂಶೋಧನಲೋಕವನ್ನು ಬೆಳೆಸಿ.
ಧನ್ಯವಾದಗಳೊಂದಿಗೆ,
- ಸಂಶೋಧನಲೋಕ ತಂಡ

No comments:
Post a Comment